top of page
CODES homepage banner nov 2022.jpeg

In the face of escalating social and ecological breakdown, populations around the world are calling for a fundamental system change. Codes for a Healthy Earth offers a unifying whole-system healing framework to support people and communities in working together across national, cultural and ideological boundaries for radical system transformation and rapid social and ecological regeneration.

ball logo smaller.png

   ಸ್ವಸ್ಥ ಜಗತ್ತಿಗೊಂದು ನೀತಿಸಂಹಿತೆ 

 (ಜೀವನವನ್ನೇ ಪಣಕ್ಕಿಟ್ಟು ಶಾಂತಿಯನ್ನು ಸ್ಥಾಪಿಸುವುದು)

 “ನಾವು ತೆಗೆದುಕೊಳ್ಳುವ ನಿರ್ಧಾರಗಳು ನಂತರದ ಏಳು ಪೀಳಿಗೆಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆನ್ನುವುದನ್ನು ನಮ್ಮ ಪ್ರತಿಪರಿಗಣಿಸಲೇ ಬೇಕು”                   

 (ಇರುಕ್ವಾ ಬುಡಕಟ್ಟಿನ ತಿಳಿವಳಿಕೆಯ ಮಾತು)

ಪೀಠಿಕೆ

ನಾವು ಎದುರಿಸುತ್ತಿರುವ ತುರ್ತಾದ ಮತ್ತು ಸಂಕೀರ್ಣವಾದ ಸಮಸ್ಯೆಗಳು ಅವುಗಳನ್ನು ಸೃಷ್ಟಿಸಿರುವ ವ್ಯವಸ್ಥೆಯಿಂದಲೇ ಪರಿಹಾರವಾಗುವುದಿಲ್ಲ. ಇಂದು ಎಲ್ಲ ಸಂಸ್ಕೃತಿಗಳಿಗೆ ಸೇರಿದ, ಎಲ್ಲ ವಯೋಮಾನಗಳ ನಾಗರಿಕರು ಜೀವಸಂಕುಲದ ಒಬ್ಬ ಸದಸ್ಯನಾಗಿ ಮನುಷ್ಯನು ನಡೆದುಕೊಳ್ಳುತ್ತಿರುವ ರೀತಿಯಲ್ಲಿ ಆಮೂಲಾಗ್ರವಾದ ಬದಲಾವಣೆಯನ್ನು ಬಯಸಿ ದನಿಯೆತ್ತಿದ್ದಾರೆ.
 

ಕೋಟಿಗಟ್ಟಲೆ ಜನರು ಹಾಗೂ ಲಕ್ಷಾಂತರ ಸಂಘಟನೆಗಳು, ಅನುಕಂಪದಿಂದ ಕೂಡಿದ ಮತ್ತು ಮರುಹುಟ್ಟಿಗೆ ಕಾರಣವಾಗಬಲ್ಲ ಅಸಂಖ್ಯಾತ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅವುಗಳನ್ನು ಜಾರಿಗೆ ತರಲು ದುಡಿಯುತ್ತಿದ್ದಾರೆ. ವ್ಯಾಪಕವೂ ವಿಶ್ವವ್ಯಾಪಿಯೂ ವೈವಿಧ್ಯಮಯವೂ ಆದ  ಈ ಚಳುವಳಿಗಳಲ್ಲಿ ಭಾಗವಹಿಸುತ್ತಿರುವವರಿಗೆ, ನಮ್ಮ ಸಮಸ್ಯೆಗಳನ್ನು ಎದುರಿಸಲು ಅಗತ್ಯವಾದ ಜ್ಞಾನ, ಕೌಶಲ್ಯ, ಆಲೋಚನೆ, ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಅಂತೆಯೇ ವಿವೇಕ, ಸೇವಾಮನೋಧರ್ಮವಿರುವ ಮುಖಂಡರು ಈಗಾಗಲೇ ಇರುವರೆಂಬ ಸಂಗತಿಯು ಕ್ರಮೇಣ ಗೊತ್ತಾಗುತ್ತಿದೆ. ಇವೆಲ್ಲವನ್ನೂ ಬಳಸಿಕೊಂಡು ಇಡೀ ವ್ಯವಸ್ಥೆಯ ಚಿಕಿತ್ಸೆ ಮತ್ತು ಪರಿವರ್ತನೆಗಾಗಿ ಆದಷ್ಟು ಚೆನ್ನಾಗಿ ಸಂಘಟಿತರಾಗುವುದೇ ನಮ್ಮ ಮುಂದಿರುವ ಮುಖ್ಯವಾದ ಸವಾಲು. 
 

ಜಗತ್ತಿನಲ್ಲಿ ವಿಪುಲವಾಗಿ ಲಭ್ಯವಿರುವ ವಿವೇಕ ಮತ್ತು ಮಾರ್ಗೋಪಾಯಗಳನ್ನು ಆದಷ್ಟು ಚೆನ್ನಾಗಿ ಒಂದುಗೂಡಿಸುವುದು ನಮ್ಮ ಮೊದಲ ಗುರಿ. ಇದು ಸಾಧ್ಯವಾಗಲು, ಆಸಕ್ತ ನಾಗರಿಕರಾದ ನಾವು, ವೈಯಕ್ತಿಕವಾಗಿ, ಅಂತೆಯೇ ಸಾಮುದಾಯಿಕವಾಗಿ ನಮ್ಮ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಮರಳಿ ಪಡೆಯಬೇಕು. ಹಾಗೆ ಮಾಡಿದ ಬಳಿಕ ಸ್ವತಃ ನಮ್ಮನ್ನು ಮತ್ತು ಆಡಳಿತ, ಕಾನೂನು, ಆರ್ಥಿಕತೆ, ಶಿಕ್ಷಣ, ಮಾಧ್ಯಮಗಳು ಮುಂತಾದ ಸಾಮಾಜಿಕ ಸಂಸ್ಥೆಗಳನ್ನು ಬಾಳುವಿಕೆಯ ಮೂಲತತ್ವಗಳು ಮತ್ತು ಅರಳುತ್ತಿರುವ ಮನುಷ್ಯಪ್ರಜ್ಞೆಯೊಂದಿಗೆ ಒಂದುಗೂಡಿಸಬೇಕು.
 

ಈ ತಿಳಿವಳಿಕೆಯ ಹಿನ್ನೆಲೆಯಲ್ಲಿ ನಾವು ‘ನಾಗರಿಕ’ ಎಂಬ ಪದದ ನಿರ್ವಚನವನ್ನು ಬದಲಿಸಲು ಬಯಸುತ್ತೇವೆ. ಆ ಪದಕ್ಕೆ ಸಾಂಪ್ರದಾಯಿಕವಾಗಿ ನೀಡಲಾಗಿರುವ ‘ರಾಷ್ಟ್ರವೊಂದರ ಪ್ರಜೆಗಳು’ ಎಂಬ ನಿರ್ವಚನವನ್ನು ಬಿಡಬೇಕು. ಅದರ ಬದಲು ನಾವೆಲ್ಲರೂ ಹಂಚಿಕೊಂಡಿರುವ ಮನೆಯಾದ ಈ ಭೂಮಿಯಲ್ಲಿ, ಸ್ವಯಮಧಿಕಾರವನ್ನು ಕೊಟ್ಟುಕೊಂಡ, ಪರಸ್ಪರ ಅನುಕಂಪವುಳ್ಳ, ಜವಾಬ್ದಾರಿಯುತರಾದ ನಾಗರಿಕರೆಂಬ ಪರಿಕಲ್ಪನೆಯನ್ನು ಜಾರಿಗೆ ತರಬೇಕು. ಇದು ಗಡಿಗಳೇ ಇಲ್ಲದ ಜೀವಂತವಾದ ಪರಿಸರ-ವ್ಯವಸ್ಥೆ.  ಇದನ್ನು ನಾವು ಭೂಮಿಯೆಂದು ಕರೆಯುತ್ತೇವೆ. ಈ ಭೂಮಿಯ ನಾಗರಿಕರಾಗಿ ನಾವು ಯಾವುದೇ ರಾಜಿಗೆ ಸಿದ್ಧವಿಲ್ಲದ ಜಾಗತಿಕವಾದ ವ್ಯೂಹತಂತ್ರವೊಂದರ ಸುತ್ತ ಒಂದಾಗುತ್ತಿದ್ದೇವೆ. ಈ ಒಗ್ಗಟ್ಟು ನಮ್ಮ ನಡುವಿನ ಭಿನ್ಣಾಭಿಪ್ರಾಯಗಳನ್ನು ಮೀರಿ ನಿಲ್ಲುತ್ತದೆ. ಇದು ಸ್ವಸ್ಥವಾದ ಭೂಮಿಯ ಬಗೆಗಿನ ನಮ್ಮ ಕನಸುಗಳು ಮತ್ತು ಹಂಬಲಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ನೆರವಾಗುತ್ತದೆ. ಅಷ್ಟೇ ಅಲ್ಲ, ಇದು ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ನಾಗರಿಕರ ನಾಯಕತ್ವವುಳ್ಳ ಸ್ವಯಮಾಡಳಿತವಿರುವ ಸಂಸ್ಥೆಗಳಿಗೆ ಬೆಂಬಲವಾಗುತ್ತದೆ. 
 

ನಾವು ಎಲ್ಲ ಬಗೆಯ ಪಾರಂಪರಿಕವಾದ ತಿಳಿವಳಿಕೆಯನ್ನೂ ಗೌರವಿಸುತ್ತೇವೆ. ಅವು ತಮ್ಮ ಅನನ್ಯವಾದ ಹಾಗೂ ಸಾಮುದಾಯಿಕವಾದ ಜ್ಞಾನವನ್ನು ಒಟ್ಟು ಮಾನವತೆಯ, ಹಾಗೂ ಸಮಗ್ರ ಜೀವರಾಶಿಗಳ ಒಳಿತಿಗಾಗಿ ನಮ್ಮೊಡನೆ ಹಂಚಿಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ. ಹೀಗೆ ಮಾಡುವದರಿಂದ ನಾವೇ ನಾಶ ಮಾಡಿರುವ  ಪೃಥಿವಿಯನ್ನು ಮರಳಿ ಆರೋಗ್ಯವಂತವಾಗಿ ಮಾಡುವ ಪ್ರಕ್ರಿಯೆಯ ವೇಗವು ಜಾಸ್ತಿಯಾಗುತ್ತದೆ. ಮತ್ತು ಸಮಸ್ತ ಜೀವಸಂಕುಲಗಳಿಗೆ ಒಳ್ಳೆಯ ಭವಿಷ್ಯವನ್ನು ನೀಡಲು ಸಾಧ್ಯವಾಗುತ್ತದೆ.

ಘೋಷಣೆ:

ಈ ಭೂಮಿಯ ನಾಗರಿಕರಾದ ನಾವು ನಮ್ಮ  ಮನೆ ಮತ್ತು ಅದರಲ್ಲಿ ವಾಸಿಸುವ ಪ್ರತಿಯೊಂದು ಜೀವಿಯ ಬಗೆಗಿನ ಪ್ರೀತಿ ಮತ್ತು ಕಾಳಜಿಯಿಂದ ಒಂದುಗೂಡಿದ್ದೇವೆ. ನಾವು ಇಲ್ಲಿರುವ ಸಮಗ್ರ ಜೀವರಾಶಿಯ ಒಳಿತಿಗಾಗಿ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಸೈದ್ಧಾಂತಿಕ ಗಡಿಗೆರೆಗಳನ್ನು ಮೀರಿ ದುಡಿಯುತ್ತೇವೆ.

ನಮ್ಮ ವೈಯಕ್ತಿಕ, ಸಾಮುದಾಯಿಕ ಮತ್ತು ಇಡೀ ಭೂಮಿಯ ಆರೋಗ್ಯವು ಪರಸ್ಪರ ಸಂಬಂಧಿತ ಮತ್ತು ಅವಲಂಬಿತವಾಗಿವೆ. ಆದ್ದರಿಂದ ಒಟ್ಟು ಮನುಷ್ಯಜಾತಿಯ ಏಳಿಗೆಯಾಗಬೇಕಾದರೆ, ಇಡೀ ಭೂಮಿಯ ಎಲ್ಲ ಭಾಗಗಳ ಪರಿಸರದ ಏಳಿಗೆ ಆಗಬೇಕು.

ಜಗತ್ತಿನ ಎಲ್ಲ ಸರ್ಕಾರಗಳ ಒಂದೇ ಒಂದು ಕಾರ್ಯನೀತಿಯೆಂದರೆ, ಇಡೀ ಭೂಮಿ ಮತ್ತು ಅದರ ಎಲ್ಲ ನಿವಾಸಿಗಳ ಆರೋಗ್ಯ ಮತ್ತು ಜೀವಂತಿಕೆಗಳನ್ನು ಬರಲಿರುವ ಹಲವು ಪೀಳಿಗೆಗಳವರೆಗೆ ಕಾಪಾಡುವುದು ಮತ್ತು ಉತ್ತಮ ಗೊಳಿಸುವುದು. ನಾವು ಈ ಸಂಗತಿಯನ್ನು ಒತ್ತಿ ಹೇಳುತ್ತೇವೆ.
 

ಆದ್ದರಿಂದ ಈ ಭೂಮಿಯ ನಾಗರಿಕರಾದ ನಾವು ಜಾಗತಿಕ ಮಟ್ಟದಲ್ಲಿ, ತಕ್ಷಣ ಕಾರ್ಯಪ್ರವೃತ್ತರಾಗಲು ಮತ್ತು ಹಿಂಜರಿಯದೆ ಇರಲು ಪಣತೊಡುತ್ತೇವೆ. ನಾವು ತಳಮಟ್ಟದ ಚಳುವಳಿಗಳು, ಮೂಲನಿವಾಸಿ ಸಮುದಾಯಗಳು, ಸ್ಥಳೀಯ/ರಾಷ್ಟ್ರೀಯ/ಅಂತಾರಾಷ್ಟ್ರೀಯ ಆಡಳಿತ ವ್ಯವಸ್ಥೆಗಳು, ಸರ್ಕಾರೇತರ ಸಂಘಟನೆಗಳು, ಕಾರ್ಪೊರೇಟ್ ವ್ಯವಸ್ಥೆಗಳು ಮತ್ತು ಆರ್ಥಿಕ ಸಂಸ್ಥೆಗಳ ಸಹಯೋಗದಲ್ಲಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ನಮ್ಮ ಉದ್ದೇಶಗಳು

  1. ಎಲ್ಲ ಜೀವಿಗಳ ಯೋಗಕ್ಷೇಮ, ಸುಸ್ಥಿತಿ ಮತ್ತು ಐಕಮತ್ಯವನ್ನು ಕಾಪಾಡಲು ದುಡಿಯುವ ಉದ್ದೇಶದಿಂದ ನಮ್ಮ ಸಾಮಾಜಿಕ ವ್ಯವಸ್ಥೆಗಳನ್ನು ಪರಿವರ್ತಿಸುವುದು. 

  2. ನಮ್ಮ ಜೀವಸಂಕುಲಗಳ ಆರೋಗ್ಯ ಮತ್ತು ವೈವಿಧ್ಯಗಳನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು.

  3. ಎಲ್ಲ ಮನುಷ್ಯರಿಗೆ ಮತ್ತು ಪ್ರಾಣಿಜಾತಿಗಳ ಮೂಲಭೂತ ಅಗತ್ಯಗಳನ್ನು ಪೂರೈಸಲೆಂದು ಅವರಿಗೆ, 

ಅ. ಶುದ್ಧವಾದ ನೀರು

ಆ. ನಿರ್ಮಲವಾದ ಗಾಳಿ

ಇ. ಕಲುಷಿತವಾಗದ ಭೂಮಿ

ಈ. ಜೀವಪುಷ್ಟಿ ಕೊಡುವ ಆಹಾರ 

ಉ. ಅಗತ್ಯ ಸೌಲಭ್ಯಗಳಿರುವ ವಸತಿ

ಊ. ಭೌತಿಕ ಹಾಗೂ ಭಾವನಾತ್ಮಕವಾದ ರಕ್ಷಣೆ   ಮತ್ತು

ಋ. ಅವರ ಅನನ್ಯ ಸಾಮರ್ಥ್ಯಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲು ಹಾಗೂ ತಮ್ಮ ಸಮುದಾಯಗಳು ಮತ್ತು ಪರಿಸರವ್ಯವಸ್ಥೆಗಳನ್ನು ಬೆಳೆಸಿ ತಾವೂ ಬೆಳೆಯಲು ಅಗತ್ಯವಾದ ಸಾಂಸ್ಕೃತಿಕ-ಪಾರಿಸರಿಕ ಸನ್ನಿವೇಶಗಳನ್ನು 

ಒದಗಿಸುವ ಭರವಸೆಯನ್ನು ನೀಡುವುದು.

   4. ನಮ್ಮ ಸಾಮುದಾಯಿಕ ಸವಾಲುಗಳು, ಈಗಾಗಲೇ ಇರುವ ಪರಿಹಾರಗಳು ಮತ್ತು ಹೊಸ ಹಾದಿಗಳ ಬಗೆಗಿನ ತಿಳಿವಳಿಕೆಯನ್ನು ಎಲ್ಲರೂ         ಹಂಚಿಕೊಳ್ಳಲು ಅನುವು ಮಾಡಿಕೊಡುವುದು. ಇದು ಸಮಗ್ರ ಜಗತ್ತನ್ನು ಕುರಿತಾದ ತಿಳಿವಳಿಕೆಯಾಗಿರುತ್ತದೆ. 

   5. ನಾವು ಶಾಂತಿ, ಕರುಣೆ, ವೈವಿಧ್ಯತೆಯಲ್ಲಿ ಸಹಜೀವನ, ವಿವೇಕ, ನೈತಿಕ ಬದ್ಧತೆ, ಉತ್ತರದಾಯಿತ್ವ, ಸಹಯೋಗ ಮತ್ತು ಎಲ್ಲ ಜೀವಿಗಳ         ಬಗೆಗಿನ ಗೌರವದಿಂದ ಕೂಡಿರುವ ಸಂಸ್ಕೃತಿಯ ಕಡೆಗಿನ ಚಲನೆಯನ್ನು ಸೃಷ್ಟಿಸಬೇಕಾಗಿದೆ. ಇದು ಜಾಗತಿಕ ಮಟ್ಟದಲ್ಲಿಯೇ                         ನಡೆಯಬೇಕು. 
(SPACING)

 

ನಮ್ಮ ಮಾರ್ಗದರ್ಶಕ ತತ್ವಗಳು  
ಸಮಗ್ರ ಪರಿಸರ-ವ್ಯವಸ್ಥೆಗೆ ಕ್ರಾಂತಿಕಾರಕವಾದ ಚಿಕಿತ್ಸೆ ಮಾಡಲೋಸ್ಕರ, ನಮ್ಮ ಕಾಲದಲ್ಲಿ ತುರ್ತಾಗಿ ಬೇಕಾಗಿರುವ ಕಾರ್ಯನೀತಿಯನ್ನು ರೂಪಿಸಲು ಅಗತ್ಯವಾದ ತಳಹದಿಯಾಗಿರುವ ಈ ಕೆಳಗಿನ ತತ್ವಗಳಿಗೆ ನಾವು ಬದ್ಧರಾಗಿರುತ್ತೇವೆ:
 

ಅಹಿಂಸೆ ಮತ್ತು ನಾಯಕತ್ವದ ಸ್ವರೂಪ

  • ಪರಿಸರಕ್ಕೆ ಹಾನಿಯಾಗುವ ಯಾವುದೇ ಕೆಲಸವನ್ನು ಮಾಡದಿರಲು ಮತ್ತು ನಮ್ಮ ಆಲೋಚನೆ, ಮಾತು ಮತ್ತು ಕ್ರಿಯೆಗಳನ್ನು ಸಮಗ್ರ ಜೀವಸಮುದಾಯಗಳನ್ನು ಪೋಷಿಸಲು ನೆರವಾಗುವಂತೆ ಅಳವಡಿಸಿಕೊಳ್ಳಲು ನಾವು ಬದ್ಧರಾಗಿರುತ್ತೇವೆ.

  • ಜೀವನದ ಮೂಲಭೂತ ತಳಹದಿಗಳಾದ ನೆಲ, ನೀರು, ಗಾಳಿ, ಬೆಂಕಿ, ವಾತಾವರಣ, ಜೀವವೈವಿಧ್ಯ ಮತ್ತು ಜೀವಜಾಲಗಳನ್ನು ಗೌರವಿಸಲು ಹಾಗೂ ಕಾಪಾಡಲು ನಾವು ಪಣತೊಡುತ್ತೇವೆ. ಪ್ರಕೃತಿಯನ್ನು ಮೊದಲ ಕಾಲದ ನಿರ್ಮಲವೂ ಸಹಜವೂ ಆದ ಸ್ಥಿತಿಗೆ ತರುವ ಹಾದಿಯಲ್ಲಿ ನಾವು ದುಡಿಯುತ್ತೇವೆ.

  • ನಾವು ಮೂಲನಿವಾಸಿಗಳು ಮತ್ತು ಅವರ ನೆಲೆಗಳನ್ನು ಗೌರವದಿಂದ ಕಾಣಲು ಮತ್ತು ಅವುಗಳನ್ನು ರಕ್ಷಿಸಲು ಬದ್ಧರಾಗಿದ್ದೇವೆ.  ಅವರ ತಿಳಿವಳಿಕೆ, ಸಲಹೆ-ಸೂಚನೆಗಳು, ಜ್ಞಾನವ್ಯವಸ್ಥೆಗಳನ್ನು ಮನುಷ್ಯ ವ್ಯವಹಾರಗಳ ಎಲ್ಲ ವಲಯಗಳಲ್ಲಿಯೂ ಅಳವಡಿಸಿಕೊಳ್ಳುತ್ತೇವೆ. 

  • ನಾವು ತೆಗೆದುಕೊಳ್ಳುವ ಎಲ್ಲ ತೀರ್ಮಾನಗಳೂ ಅವು ಅನಂತರದ ಏಳು ಪೀಳಿಗೆಗಳವರೆಗಿನ ಸಮಗ್ರ ಜೀವಸಮುದಾಯಗಳ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ವಿಶ್ಲೇಷಣೆಯನ್ನೇ  ಆಧರಿಸಿರುತ್ತವೆ. ಹೀಗೆ ಮಾಡುವಾಗ ಮನುಷ್ಯರಲ್ಲದೆ ಇತರ ಪ್ರಾಣಿ-ಸಸ್ಯ ಜಾತಿಗಳ ಆಗುವ ಪರಿಣಾಮಗಳನ್ನೂ ಪರಿಗಣಿಸುತ್ತೇವೆ.

  

 ವೈವಿಧ್ಯಗಳ ಸಮನ್ವಯ

  • ನಾವು ಚಲಿಸುವ ಹಾದಿಯಲ್ಲಿ, ಅಂಚಿಗೆ ತಳ್ಳಲ್ಪಟ್ಟಿರುವ ಸಮುದಾಯಗಳ ದನಿಗಳನ್ನು ಗಮನಕ್ಕೆ ತಂದುಕೊಳ್ಳುತ್ತೇವೆ ಮತ್ತು ಅವುಗಳನ್ನು ಗೌರವದಿಂದ ಕಾಣುತ್ತೇವೆ. 

  • ಎಲ್ಲ ಸಾಮಾಜಿಕ ವಲಯಗಳಲ್ಲಿಯೂ ಹೆಂಗಸರು ಮತ್ತು ಹುಡುಗಿಯರಿಗೆ ಸಂಪೂರ್ಣ ಸಂರಕ್ಷಣೆ ಮತ್ತು ಸಮಾನತೆಗಳನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ.

  • ಮಹಿಳೆಯರು ಮತ್ತು ಪುರುಷರ ನಡುವೆ ಪರಸ್ಪರ ಗೌರವ ಮತ್ತು ಸಾಮರಸ್ಯಗಳು ಇರುವಂತೆ ನಾವು ನೋಡಿಕೊಳ್ಳುತ್ತೇವೆ.

  • ಪರಿಸರ ಮತ್ತು ಮನುಷ್ಯಜಾತಿಯಲ್ಲಿರುವ ವೈವಿಧ್ಯವು ಒಟ್ಟು ಜೀವನದ ಶ್ರೀಮಂತಿಕೆಯನ್ನು ಹೆಚ್ಚಿಸುವ ಬಗೆಯನ್ನು ಕುರಿತ ನಮ್ಮ ತಿಳಿವಳಿಕೆಯನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತೇವೆ.

  • ವ್ಯಕ್ತಿಗಳು, ಸಂಸ್ಕೃತಿಗಳು ಹಾಗೂ ಪರಿಸರಗಳು ನಾಶದ ಕಡೆಗೆ ಚಲಿಸಿದಾಗ ಉಂಟಾಗುವ ಆಘಾತದ ಆಳಪದರಗಳನ್ನು ಒಪ್ಪಿಕೊಂಡು, ಅತ್ಯಂತ ಸೂಕ್ಷ್ಮವಾದ ಸಮುದಾಯಗಳು, ಜೀವಜಾತಿಗಳು ಮತ್ತು ಪರಿಸರ ವ್ಯವಸ್ಥೆಗಳನ್ನು ಮೊದಲ ಆಯ್ಕೆಯಾಗಿ ಗುಣಪಡಿಸುವ ಮತ್ತು ಮರುಸ್ಥಾಪನೆ ಮಾಡುವ ವ್ಯೂಹತಂತ್ರಗಳನ್ನು ಅಳವಡಿಸಿಕೊಳ್ಳುವುದು. 
     

ಆರ್ಥಿಕತೆ, ಕಾನೂನು ಮತ್ತು ನಾಯಕತ್ವ  

  • ಜೀವರಾಶಿಗಳನ್ನು ಸಂರಕ್ಷಿಸುವ ಹಾಗೂ ಮರುಸೃಷ್ಟಿಸುವ ಕಾನೂನುಗಳಿಗೆ ಅಧಿಕೃತ ಮನ್ನಣೆಯನ್ನು ನೀಡಿ, ಜೀವಕ್ಕೆ ಹಾನಿ ಮಾಡಲು ಸಮ್ಮತಿಸುವ ಕಾನೂನುಗಳನ್ನು ನಿರಾಕರಿಸುವುದು.

  • ಜೀವರಾಶಿಗಳನ್ನು ಕಾಪಾಡುವ ಹಾಗೂ ಮರುಸೃಷ್ಟಿಸುವ ಯೋಜನೆಗಳಲ್ಲಿ ಮಾತ್ರ ಬಂಡವಾಳ ಹೂಡಿ, ಜೀವಕ್ಕೆ ಹಾನಿಮಾಡುವ ಅಥವಾ ಹಾನಿ ಮಾಡಬಲ್ಲ ಎಲ್ಲ ಯೋಜನೆಗಳಲ್ಲಿಯೂ ಬಂಡವಾಳ ಹೂಡಿಕೆಯನ್ನು ನಿಲ್ಲಿಸುವುದು. 

  • ಜೀವರಾಶಿಗಳಿಗೆ ಹಾನಿ ಮಾಡುತ್ತಿರುವ ಎಲ್ಲ ನಿಗಮಗಳು ಮತ್ತು ಉದ್ಯಮಗಳು ಬದಲಾವಣೆ ಮಾಡಿಕೊಳ್ಳಲು ಅಥವಾ ಇಲ್ಲವಾಗಲು ಬೆಂಬಲ ಕೊಡುವುದು.

  • ಆರೋಗ್ಯಕರವಾದ ಅರ್ಥವ್ಯವಸ್ಥೆಗಳು ಮತ್ತು ಉದ್ಯಮಗಳ ದಿಕ್ಕಿನಲ್ಲಿ ನಾವು ಸ್ಥಿತ್ಯಂತರವಾಗುತ್ತಿರುವಾಗ, ಎಲ್ಲ ಮನುಷ್ಯರು ಮತ್ತು ಪ್ರಾಣಿಗಳ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಅಗತ್ಯವಾದ ಸನ್ನಿವೇಶವನ್ನು ಒದಗಿಸಿಕೊಡುವುದು.

  • ನಾಯಕತ್ವವನ್ನು ವಹಿಸಬೇಕಾದ ಅಧಿಕಾರ ಸ್ಥಾನಗಳನ್ನು ಹೊಂದಿರುವ ಜನರು ‘ಸಮಗ್ರ ವ್ಯವಸ್ಥೆಯ ಆರೋಗ್ಯ ಮತ್ತು ಚಿಕಿತ್ಸೆ’ಗೆ ಸಂಬಂಧಿಸಿದ ತತ್ವಾದರ್ಶಗಳನ್ನು ಜಾರಿಗೆ ತರಲು ಅಗತ್ಯವಾದ ಪರಿಣಿತಿಯನ್ನು ಪಡೆದಿರುವಂತೆ ಹಾಗೂ ಅವರು ಸಮಗ್ರ ಶೀಲ, ಧೈರ್ಯ, ಅನುಕಂಪ, ವಿವೇಕ, ಬದ್ಧತೆ, ಸೇವಾಮನೋಧರ್ಮ, ಕಾರ್ಯಪರಿಣತಿ, ಒಟ್ಟು ಲೋಕದ ಒಳಿತಿಗಾಗಿ ಸಮರ್ಪಣ ಭಾವ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡಿರುವಂತೆ ನೋಡಿಕೊಳ್ಳುವುದು. 
     

ಶಿಕ್ಷಣ, ಕಲಿಕೆ ಮತ್ತು ಮಾಧ್ಯಮಗಳು  

  • ಪ್ರಪಂಚದ ಎಲ್ಲೆಡೆಯೂ ಹರಡಿಕೊಂಡಿರುವ ನಾಗರಿಕರಿಗೆ ನಾವು ಎದುರಿಸುತ್ತಿರುವ ಜಾಗತಿಕ/ಸ್ಥಳೀಯ ಸವಾಲುಗಳು, ವ್ಯವಸ್ಥೆಯಲ್ಲಿಯೇ ಅಡಗಿರುವ ಕಾರಣಗಳು, ಈಗಾಗಲೇ ಇರುವ ಹಲವು ಪರಿಹಾರೋಪಾಯಗಳು, ವೈಯಕ್ತಿಕ, ಸಾಮೂಹಿಕ ಹಾಗೂ ವೈಶ್ವಿಕವಾದ ಚಿಕಿತ್ಸೆ ಮತ್ತು ಪರಿವರ್ತನೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಎಲ್ಲ ವಲಯಗಳ ಸಂಘಸಂಸ್ಥೆಗಳನ್ನು ಕುರಿತಾದ ಮಾಹಿತಿಯನ್ನು ಒದಗಿಸುವುದು. 

  • ಎಲ್ಲ ವಯೋಮಾನಗಳು, ಕಲಿಕಾವಿಧಾನಗಳು, ಆಶಕ್ತಿಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿರುವ ಜನರಿಗೆ ಸಮಗ್ರವಾದ ತಿಳಿವಳಿಕೆ ಮೂಡಲು ಸೂಕ್ತವಾದ ಕಲಿಕಾ ಅವಕಾಶಗಳನ್ನು ಗುರುತಿಸುವುದು, ಬೆಳೆಸುವುದು ಮತ್ತು ಅವುಗಳ ಬೆಲೆಕಟ್ಟುವುದು.,ಇದರಿಂದ ವ್ಯಕ್ತಿ, ಸಮುದಾಯ ಹಾಗೂ ಇಡೀ ಸಮಾಜವು ಏಳಿಗೆಗೆ ಬರುತ್ತದೆ.

  • ವ್ಯವಸ್ಥೆಗಳನ್ನು ಕೇಂದ್ರವಾಗಿ ಹೊಂದಿರುವ ಚಂತನೆ ಮತ್ತು ಸಮಗ್ರವ್ಯವಸ್ಥೆಯ ಆರೋಗ್ಯ ಹಾಗೂ ಗುಣಪಡಿಸುವಿಕೆಯನ್ನೇ ಕೇಂದ್ರವಾಗಿ ಹೊಂದಿರುವ ಚಿಂತನೆಯ ವಿವೇಕ, ಕಲೆ ಮತ್ತು ವಿಜ್ಞಾನಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅಳವಡಿಸಿಕೊಳ್ಳುವುದು. 

  • ನಮ್ಮ ಭಾಷೆ, ಸಂವಹನ ಕೌಶಲ್ಯಗಳು, ಸೃಜನಶೀಲ ಅಭಿವ್ಯಕ್ತಿ ಮತ್ತು ಸಾಂಸ್ಕೃತಿಕ ಕಥನಗಳನ್ನು ಬಳಸಿಕೊಂಡು ಮಾಹಿತಿಗಳ ಅರಿವಿರುವ ಮತ್ತು ತಮ್ಮ ಹಕ್ಕುಗಳನ್ನು ಪ್ರಬಲವಾಗಿ ಮಂಡಿಸುವ ಮನುಷ್ಯಸಮುದಾಯಗಳನ್ನು ರೂಪಿಸುವುದು. 
     

ಹೊಸ ಸಾಮಾಜಿಕ ವ್ಯವಸ್ಥೆಗಳಿಗೆ ಸ್ಥಿತ್ಯಂತರ ಹೊಂದುವುದು

  • ನಿರಂತರವಾಗಿ ಬೆಳೆಯುತ್ತಿರುವ ಅಂತರ್ಜಾಲ ವೇದಿಕೆಯೊಂದನ್ನು ರೂಪಿಸುವುದು. ಇದರ ಮೂಲಕ, ಎಲ್ಲ ವಲಯಗಳಲ್ಲಿಯೂ ಸಮಗ್ರ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದ ರೂಪಿತವಾಗಿರುವ,  ಅತ್ಯುತ್ತಮವಾದ ಹೊಸ ಹಾದಿಗಳನ್ನು ಕಂಡುಕೊಂಡಿರುವ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನುಗಳು, ನೀತಿಗಳು, ಮತ್ತು ಆಚರಣೆಗಳನ್ನು ಕಲಿಯುವ, ಸಂಗ್ರಹಿಸುವ, ಪರಿಷ್ಕರಿಸುವ ಮತ್ತು ಪ್ರಸಾರ ಮಾಡುವ ಕೆಲಸಗಳು ನಡೆಯಬೇಕು.  

  • ಎಲ್ಲ ಬಗೆಯ ವೈಜ್ಞಾನಿಕ ಪ್ರಗತಿ ಮತ್ತು ತಂತ್ರಜ್ಞಾನಗಳನ್ನು ಸಮಗ್ರ ವ್ಯವಸ್ಥೆಯ ಆರೋಗ್ಯಪಾಲನೆ ಮತ್ತು ಗುಣಪಡಿಸುವಿಕೆಗೆ ನೆರವಾಗುವಂತೆ ಅಳವಡಿಸಿಕೊಳ್ಳುವುದು. 

  • ನಾಗರಿಕರೇ ಮುಖಂಡರಾಗಿರುವ, ಸ್ವಯಂ-ವ್ಯವಸ್ಥಿತವಾದ ‘ವಿವೇಕ ಮತ್ತು ಪರಿಣಿತಿಗಳ ಸಲಹಾಮಂಢಳಿ’ಯನ್ನು ರೂಪಿಸುವುದು. ಈ ಮಂಢಳಿಯು ಅತ್ಯಂತ ವಿವೇಕಯುತವಾದ ನೀತಿಗಳು ಮತ್ತು ಅತ್ಯಂತ ಪರಿಣಾಮಕಾರಿಯಾದ ಪರಿಹಾರಗಳ ಬಗ್ಗೆ ಬುದ್ಧಿವಾದ ನೀಡುತ್ತದೆ. ಹಾಗೆ ಮಾಡುವಾಗ ಎಲ್ಲ ಮನುಷ್ಯರು ಮತ್ತು ಮನುಷ್ಯರಲ್ಲದ ಜೀವಜಾತಿಗಳ ಅವಶ್ಯಕತೆಗಳು, ಸಂಪನ್ಮೂಲಗಳು ಮತ್ತು ಪರಸ್ಪರ ಅವಲಂಬನೆಗಳಿಗೆ ದನಿಕೊಡಲು ಪ್ರಯತ್ನಿಸುತ್ತದೆ.   

  • ಸ್ಥಳೀಯ ಮತ್ತು ಜಾಗತಿಕ ಆಡಳಿತಗಳ ಹೊಸ ಆಕೃತಿಗಳಿಗೆ ನಿರಾಯಾಸವಾಗಿ ಪರಿವರ್ತನೆ ಹೊಂದಲು ಅಗತ್ಯವಾದ ಕಾರ್ಯವಿಧಾನ ಮತ್ತು ವಿನ್ಯಾಸಗಳನ್ನು ರೂಪಿಸಲಾಗುತ್ತದೆ. ಇದು ಇಡೀ ಜಗತ್ತಿನ ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಹಾಗೂ ಜೀವದಾಯಕವಾಗಿ ಚೈತನ್ಯವು ಹರಿಯಲು ಅನುವು ಮಾಡಿಕೊಡುತ್ತದೆ. ಇಲ್ಲಿ ಚೈತನ್ಯದ ಹರಿವು ಎಂದರೆ, ಸಂಪನ್ಮೂಲಗಳು, ಕೌಶಲ್ಯಗಳು, ತಿಳಿವಳಿಕೆ, ವಿಚಾರಗಳು ಮುಂತಾದ ಸಂಗತಿಗಳ ವರ್ಗಾವಣೆ ಮತ್ತು ವಿನಿಮಯ. 
     

ಈ ಭೂಮಿಯ ನಾಗರಿಕರಾದ ನಾವು, ಇದುವರೆಗೆ ನಿರೂಪಿಸಿದ ನೀತಿಸಂಹಿತೆಯಲ್ಲಿ ಹೇಳಲಾಗಿರುವ ತತ್ವಗಳು ಮತ್ತು ನೀತಿಗಳಿಗೆ ಹತ್ತುಹಲವು ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸುವ ಮತ್ತು ಎಲ್ಲ ಜೀವಿಗಳೊಂದಿಗೆ ಶಾಂತವಾಗಿ ಬಾಳುಬಲ್ಲ ವಾತಾವರಣವನ್ನು ನಿರ್ಮಿಸುವ ಸಾಮರ್ಥ್ಯ ಇದೆಯೆಂದು ಆಗ್ರಹಪೂರ್ವಕವಾಗಿ ಹೇಳುತ್ತೇವೆ.   


ಇಲ್ಲಿ ನಿರೂಪಿಸಿರುವ ತಾತ್ವಿಕತೆಯನ್ನು, ಪ್ರಾಯೋಗಿಕವಾಗಿ ಜಾರಿಗೆ ತರಬಹುದಾದ ಕಾನೂನುಗಳು ಹಾಗೂ ಕಾರ್ಯನೀತಿಗಳಾಗಿ ಮರುರೂಪಿಬಹುದೆಂದು ನಾವು ಶಿಫಾರಸು ಮಾಡುತ್ತೇವೆ. ಇದು ಕ್ರಮೇಣ ಹಾಗೂ ನಿರಂತರವಾಗಿ ಆಗಬೇಕಾದ ಕೆಲಸ. ರಾಷ್ಟ್ರೀಯ ಮತ್ತು ಸ್ಥಳೀಯ ಸರ್ಕಾರಗಳು, ನಿಗಮಗಳು ಮತ್ತು ನಾಗರಿಕರ ನಾಯಕತ್ವದ ಸಂಸ್ಥೆಗಳು ಇವುಗಳನ್ನು ಅಳವಡಿಸಿಕೊಳ್ಳಬಹುದು. ಇಡೀ ವ್ಯವಸ್ಥೆಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡ ಇಂಥದೊಂದು ಸಮಗ್ರ ಚೌಕಟ್ಟನ್ನು ಅಳವಡಿಸಿಕೊಳ್ಳುವುದರಿಂದ ಜಗತ್ತಿನ ನಾಗರಿಕರಿಗೆ ಪರಿಣಾಮಕಾರಿಯಾಗಿ ಸ್ವಯಂ-ವ್ಯವಸ್ಥಿತರಾಗಲು ಸಾಧ್ಯವಾಗುತ್ತದೆ. ಆಗ ಅವರು, ಎಲ್ಲರೂ ಹಂಚಿಕೊಂಡಿರುವ ಅಭಿವೃದ್ಧಿಯಾಗುತ್ತಿರುವ ಪರಿಸರ ವ್ಯವಸ್ಥೆಯೊಂದನ್ನು ಪ್ರತಿನಿಧಿಸುತ್ತಾರೆ. ಅಂಥ ವ್ಯವಸ್ಥೆಯಲ್ಲಿ,

  • ಪ್ರಕೃತಿಯನ್ನು ಅದು ಮೊದಲು ಇದ್ದಂತಹ ಸಮತೋಲಿತವಾದ ಸ್ಥಿತಿಗೆ ಮರಳಿ ತರಲಾಗುತ್ತದೆ. ಅಲ್ಲಿ ಎಲ್ಲ ಜೀವಿಗಳಿಗೂ ನಿರ್ಮಲವಾದ ಗಾಳಿ, ಆರೋಗ್ಯಕರವಾದ ಕೃಷಿಭೂಮಿ, ಸುಲಭವಾಗಿ ದೊರಕುವ ಶುದ್ಧ ನೀರು ಮತ್ತು ಜೀವದಾಯಿನಿಯಾದ ಆಹಾರಗಳು ಸಿಗುತ್ತವೆ. 

  • ಎಲ್ಲ ಮನುಷ್ಯರು ಮತ್ತು ಪ್ರಾಣಿಗಳಿಗೆ ಯಾವುದು ಅಗತ್ಯವಿದೆಯೋ ಅಂಥ ವಸ್ತುಗಳೆಲ್ಲವೂ ಸಿಗುತ್ತವೆ. ಆಗ ಅವರಿಗೆ ತಮ್ಮದೇ ಆದ ವಿಶಿಷ್ಟ ಸಾಧ್ಯತೆಗಳನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದರ ಜೊತೆಗೆ ಪರಸ್ಪರರು ಮತ್ತು ಒಟ್ಟು ಪ್ರಕೃತಿಯ ಜೊತೆಗೆ ಶಾಂತವಾಗಿ ಬಾಳಲು ಸಾಧ್ಯವಾಗುತ್ತದೆ. 

  • ವಿಶ್ವ ಸಮಾಜವು ಹೊಸ ಬಗೆಯ ವಿತರಣ ವ್ಯವಸ್ಥೆಗಳಿಗೆ ಅನುಗುಣವಾಗಿ ಮರುರೂಪಿತವಾಗುತ್ತದೆ. ಇಡೀ ವ್ಯವಸ್ಥೆಯ ಆರೋಗ್ಯವು ಅದರ ಕೇಂದ್ರ ಉದ್ದೇಶವೂ ಅದನ್ನು ರೂಪಿಸುವ ತಾತ್ವಿಕತೆಯೂ ಆಗಿರುತ್ತದೆ.

  • ಇಡೀ ಮಾನತೆಯೇ ಅನುಕಂಪ ತುಂಬಿದ, ಜೀವನಪೋಷಕವಾದ ಜೀವಜಾತಿಯಾಗಿ ಒಂದುಗೂಡಿ ಕೆಲಸ ಮಾಡುತ್ತದೆ. ಅದು ವೈವಿಧ್ಯಗಳ ನಡುವೆಯೂ ಸಾಮರಸ್ಯವು ಸತತವಾಗಿ ಅರಳುವಂತೆ ಮತ್ತು ಎಲ್ಲ ಜೀವಿಗಳೂ ಸುಖಬಾಳ್ವೆ ನಡೆಸಲು ಅಗತ್ಯವಾದ ಸನ್ನಿವೇಶವು ಮೂಡಿಬರುವಂತೆ ಆಗಲೆಂದು ಪ್ರಯತ್ನ ಮಾಡುತ್ತದೆ. 
     

  ನಾವೆಲ್ಲರೂ ಒಂದಾಗಿ ಏಳುತ್ತೇವೆ, ಎಲ್ಲ ಜೀವಿಗಳ ಒಳಿತಿಗಾಗಿ

bottom of page